ವೆಸ್ಟ್‍ಮಿನ್ಸ್ಟರ್ ಅಬೆ
	ಬ್ರಿಟನ್ನಿನ ರಾಜಧಾನಿ ಲಂಡನ್ ನಗರದಲ್ಲಿರುವ ಒಂದು ಚರ್ಚು. ಸು. 16 ರಿಂದ 18ನೆಯ ಶತಮಾನದವರೆಗಿನ ವಾಸ್ತುಶಿಲ್ಪವನ್ನೊಳಗೊಂಡಿರುವ ಸುಂದರವಾದ, ಕಲಾತ್ಮಕವಾದ ಬ್ರಿಟನ್ನಿನ ಚರ್ಚುಗಳಲ್ಲಿ ಇದು ಅತ್ಯಂತ ಪ್ರಮುಖವಾದುದು. ಬ್ರಿಟನ್ನಿನ ರಾಜರ, ರಾಣಿಯರ ಹಾಗೂ ಬ್ರಿಟನ್ನಿನ ಪ್ರಸಿದ್ಧ ವ್ಯಕ್ತಿಗಳ ಗೋರಿಗಳನ್ನು ಒಳಗೊಂಡಿದೆ. ಅಲ್ಲದೆ 1066ರಿಂದ ಬ್ರಿಟನ್ನಿನ ಸಿಂಹಾಸನಾರೋಹಣ ಸಮಾರಂಭ ಹಾಗೂ ರಾಜಮನೆತನದ ಸಮಾರಂಭಗಳ ಸಭಾಂಗಣವಾಗಿದೆ. ಇವುಗಳ ಜೊತೆಗೆ ಇತರ ಎಲ್ಲ ಚರ್ಚುಗಳಂತೆ ಇದು ಸಹ ಕ್ರೈಸ್ತ ಪ್ರಾರ್ಥನಾಮಂದಿರವಾಗಿದ್ದು, ದೇಶದ ಮುಖ್ಯ ಸಮಾರಂಭಗಳೂ ನಡೆಯುವುವು. ರಾಜಮನೆತನದ ಅಧೀನಕ್ಕೊಳಪಟ್ಟ ವೆಸ್ಟ್‍ಮಿನ್ಸ್ಟರ್ ಅಬೆ ಒಂದು ಸುಂದರ ಕಟ್ಟಡ ಹಾಗೂ ದಿನನಿತ್ಯದ ಪಾರ್ಥನಾ ಕೇಂದ್ರ.

	ಈ ಚರ್ಚಿನ ಇತಿಹಾಸ ಸು. 1065 ರಿಂದ ಆರಂಭವಾಗುವುದು. ಆ್ಯಂಗ್ಲೊಸ್ಯಾಕ್ಷನ್ ದೊರೆಗಳಲ್ಲಿ ಕೊನೆಯವನಾದ ಎಡ್ವರ್ಡ್ ತನ್ನ ವೆಸ್ಟ್‍ಮಿನ್ಸ್ಟರ್ ಅರಮನೆಯ ಪಕ್ಕದ ಥಾರ್ನಿದ್ವೀಪದಲ್ಲಿ ಇದ್ದ ಪ್ರಾರ್ಥನಾ ಮಂದಿರವನ್ನು ನವೀಕರಿಸಿ ದೊಡ್ಡದಾಗಿ ನಿರ್ಮಿಸಿದ. ಇದನ್ನು 1065ರಲ್ಲಿ ಆರಂಭಿಸಲಾಯಿತು. ಆರಂಭೋತ್ಸವಕ್ಕೆ ಮೊದಲೇ ಎಡ್ವರ್ಡ್ ನಿಧನನಾಗಿದ್ದ. ಆತನನ್ನು ಈ ಸ್ಥಳದಲ್ಲಿಯೇ ಸಮಾಧಿ ಮಾಡಲಾಯಿತು. ಅನಂತರ ವಿಲಿಯಮ್ ದಿ ಕಾನ್‍ಕರರ್‍ನ ಸಿಂಹಾಸನಾರೋಹಣ ಸಮಾರಂಭ ಇಲ್ಲಿಯೇ ನಡೆಯಿತು (1066). ಇದನ್ನು ನಾರ್ಮನ್ ಚರ್ಚ್ ಅಥವಾ ನಾರ್ಮನ್ ಅಬೆ ಎಂದು ಕರೆಯಲಾಗುತ್ತಿತ್ತು. ನಾರ್ಮನ್ ಅಬೆ ಎಂಬ ಹೆಸರು ಎರಡು ಶತಮಾನಗಳವರೆಗೆ ಮಾತ್ರ ಅಸ್ತಿತ್ವದಲ್ಲಿತ್ತು. 13ನೆಯ ಶತಮಾನದ ಮಧ್ಯಂತರದಲ್ಲಿ ಮೂರನೆಯ ಹೆನ್ರಿ ನಾರ್ಮನ್ ಅಬೆ ಕಟ್ಟಡವನ್ನು ಕೆಡವಿ ಹೊಸ ವಾಸ್ತುಶಿಲ್ಪದ ಮಾದರಿಯನ್ನು ಅನುಸರಿಸಿ ನಿರ್ಮಿಸಲಾರಂಭಿಸಿದ. ಇದು ಯುರೋಪಿನಲ್ಲಿ ಹಲವು ಚರ್ಚ್‍ಗಳು ನಿರ್ಮಿತಗೊಂಡ ಕಾಲ. ಫ್ರಾನ್ಸಿನಲ್ಲಿ ಅಮೀನ್ಸ್, ಎವರೆಕ್ಸ್, ಚಾಟ್ರ್ರಸ್ ಹಾಗೂ ಇಂಗ್ಲೆಂಡಿನಲ್ಲಿ ಕ್ಯಾಂಟರ್‍ಬರಿ ವಿಂಚೆಸ್ಟರ್ ಮತ್ತು ಸ್ಯಾಲಿಸ್‍ಬರಿಯಲ್ಲಿ ಚರ್ಚುಗಳು ನಿರ್ಮಾಣಗೊಂಡವು. ಮೂರನೆಯ ಹೆನ್ರಿ ತನ್ನ ಕಟ್ಟಡ ವಿನ್ಯಾಸಕಾರ ಹೆನ್ರಿ ಡಿ ರೆನ್ಸ್‍ನನ್ನು ಯುರೋಪಿನ ವಾಸ್ತುಶಿಲ್ಪವನ್ನು ಅಭ್ಯಸಿಸಲು ಕಳುಹಿಸಿಕೊಟ್ಟ. ಆತ ಹಿಂದಿರುಗಿದ ಅನಂತರ ರಾಜನ ಅಪ್ಪಣೆಯಂತೆ ವೆಸ್ಟಮಿನ್ಸ್ಟರ್ ಅಬೆಯನ್ನು ನಿರ್ಮಿಸಿದ. ಇದು ಕ್ರೈಸ್ತ ಪಾದ್ರಿಗಳಿಗೆ ಹಾಗೂ ಜನಸಾಮಾನ್ಯರಿಗೆ ಪ್ರಾರ್ಥನಾ ಮಂದಿರವಾಗಿ ರಾಜರುಗಳ ಸಿಂಹಾಸನಾರೋಹಣ ಕೇಂದ್ರವಾಗಿ ಮತ್ತು ರಾಜಮನೆತನದವರನ್ನು ಸಮಾಧಿಮಾಡುವ ಶ್ಮಶಾನವಾಗಿ ಬಳಕೆಗೊಂಡು ಪ್ರಸಿದ್ಧಿಗೆ ಬಂತು.

	ವಿಲಿಯಮ್ ದಿ ಕಾನ್‍ಕರರ್‍ನ ಅನಂತರ 5ನೆಯ ಎಡ್ವರ್ಡ್ ಹಾಗೂ 7ನೆಯ ಹೆನ್ರಿ ಇವರನ್ನು ಬಿಟ್ಟು ಉಳಿದ ಎಲ್ಲ ಬ್ರಿಟನ್ನಿನ ರಾಜರು ವೆಸ್ಟ್‍ಮಿನ್ಸ್ಟರ್ ಅಬೆಯಲ್ಲಿಯೇ ಸಿಂಹಾಸನಾರೋಹಣ ಮಾಡಿದರು. ಮೂರನೆಯ ಹೆನ್ರಿ ಎಡ್ವ್‍ರ್ಡನ ಸಮಾಧಿಯ ಪಕ್ಕದಲ್ಲಿಯೇ ತನ್ನ ಸಮಾಧಿಯನ್ನು ಮಾಡಲು ಆದೇಶಿಸಿದ. ಅನಂತರ ಇತರ ರಾಜಮನೆತನದವರನ್ನು ಸಹ ಅಲ್ಲಿಯೇ ಸಮಾಧಿ ಮಾಡಲಾಯಿತು. ಈ ಪರಂಪರೆ ಇಂದಿಗೂ ಮುಂದುವರೆದಿದೆ. ವೆಸ್ಟ್‍ಮಿನ್ಸ್ಟರ್ ಅಬೆಯಲ್ಲಿ ಇಂದಿನವರೆಗೆ ಸುಮಾರು ಮೂರು ಸಹಸ್ರ ಜನರನ್ನು ಸಮಾಧಿ üಮಾಡಲಾಗಿದೆ. ಚರ್ಚಿನ ಪಶ್ಚಿಮ ದ್ವಾರದ ಬಳಿ ಇರುವ ಒಂದು ಅನಾಮಿಕ ಸೈನಿಕನಗೋರಿ ಬಹು ಕುತೂಹಲದಾಯಕ ಹಾಗೂ ಅಲ್ಲಿನ ಮಂದಿ ಅದನ್ನು ಬಹು ಪವಿತ್ರವೆಂದು ಪರಿಗಣಿಸಿದ್ದಾರೆ.

	ಮೂರನೆಯ ಹೆನ್ರಿ ನಿರ್ಮಿಸಿದ ಕಟ್ಟಡದ ಅನಂತರ ವೆಸ್ಟ್ ಮಿನ್ಸ್ಟರ್ ಅಬೆಯಲ್ಲಿ ಏಳನೆಯ ಹೆನ್ರಿ ಅದಕ್ಕೆ ಹೊಂದಿಕೊಂಡಂತೆ ಪ್ರತ್ಯೇಕ, ಸುಂದರವಾದ ಹೊಸ ಕಟ್ಟಡವನ್ನು ನಿರ್ಮಿಸಿದ. ಆತನ ಹೆಸರಿನಿಂದಲೇ ಕರೆಯುವ ಈ ಭಾಗದ ಕಟ್ಟಡದಲ್ಲಿ ಹೆನ್ರಿಯ ಸಮಾಧಿಯಿದೆ. ಅನಂತರದಲ್ಲಿ ವೆಸ್ಟ್‍ಮಿನ್ಸ್ಟರ್ ಅಬೆ ಕ್ರಮೇಣ ಮಧ್ಯಯುಗದ ಲಕ್ಷಣಗಳನ್ನು ಕಳೆದುಕೊಂಡು ಬದಲಾವಣೆಯನ್ನು ಹೊಂದಿದೆ. 1560ರಲ್ಲಿ ಅಬೆಯನ್ನು ಆಧುನಿಕತೆಗೆ ಅನುಗುಣವಾಗಿ ನವೀಕರಣಗೊಳಿಸಲಾಗಿದೆ. ಇದರ ನಿರ್ವಹಣೆಗಾಗಿ ಪ್ರತ್ಯೇಕ ಆಡಳಿತ ಕಚೇರಿಯನ್ನು ಸ್ಥಾಪನೆ ಮಾಡಲಾಗಿದೆ.

	ಇಂದಿಗೂ ಈ ಚರ್ಚಿನಲ್ಲಿ ದಿನನಿತ್ಯ ಪ್ರಾರ್ಥನೆಗಳು ನಡೆಯುತ್ತವೆ. ವಿಶೇಷ ಪ್ರಾರ್ಥನೆಗಳೂ ಜರುಗುತ್ತವೆ. 1965-66ರಲ್ಲಿ ಇದು 900ವರ್ಷದ ವಾರ್ಷಿಕೋತ್ಸವ ಆಚರಿಸಿತು. ಬ್ರಿಟಿಷರ ಸಂಸ್ಕøತಿಯಲ್ಲಿ ವೆಸ್ಟ್‍ಮಿನ್ಸ್ಟರ್ ಅಬೆ ವಿಶೇಷ ಸ್ಥಾನಮಾನ ಹೊಂದಿದೆ.

	ವೆಸ್ಟ್‍ಮಿನ್ಸ್ಟರ್ ಚರ್ಚನ್ನು ಲ್ಯಾಟಿನ್ ಕ್ರಾಸ್ (ಶಿಲುಬೆ) ಆಕಾರದಲ್ಲಿ ನಿರ್ಮಿಸಲಾಗಿದೆ. ಇದರ ಉದ್ದ ಸು. 1,560 ಮೀ, ಎತ್ತರ ಸು. 32 ಮೀ. ಇವುಗಳ ಗೋಪುರಗಳ ಎತ್ತರ 68.58ಮೀ. ಇಲ್ಲಿನ ಗಾತಿಕ್ ಕಾಲದ ಕಲೆಗಳು ಸಾಮಾನ್ಯವಾಗಿ ಧಾರ್ಮಿಕ ಪ್ರಭಾವಕ್ಕೆ ಒಳಗಾದವು. ಈ ಚರ್ಚಿನ ಛಾವಣಿ ಆಕರ್ಷಕ ಗಾತಿಕ್ ಶೈಲಿಯಿಂದ ಕೂಡಿದೆ. 1512ರ ಟ್ಯೂಡರ್ ಶೈಲಿಯ ಕಟ್ಟಡಗಳಿಗೆ ಉದಾಹರಣೆಯಾಗಿ ಇಲ್ಲಿರುವ 7ನೆಯ ಹೆನ್ರಿಯ ಗೋರಿಯನ್ನು ನೋಡಬಹುದು. ಇಲ್ಲಿಯ ವ್ಯಕ್ತಿಚಿತ್ರಣಗಳಲ್ಲಿ ಕಂಡುಬರುವ ಪುಷ್ಟಿ ಮತ್ತು ಗಾಂಭೀರ್ಯ ಮನಸೆಳೆಯುತ್ತವೆ. ಮುಂದೆ ರಾಜಾಶ್ರಯದಲ್ಲಿ ಬಂದ ಕಲಾಕೃತಿಗಳು ಹಿಂದಿನ ಮೋಹಕ ಶೈಲಿಯನ್ನು ಉಳಿಸಿಕೊಳ್ಳಲಿಲ್ಲ. 1208ರಲ್ಲಿ ಚರ್ಚಿನ ದಕ್ಷಿಣಭಾಗದ ಧರ್ಮಗುರುಗಳ ಕೊಠಡಿಗಳು ಬೆಂಕಿಗೆ ಆಹುತಿಯಾದ ಪ್ರಯುಕ್ತ ಅವುಗಳನ್ನು ಹೊಸದಾಗಿ ನಿರ್ಮಿಸಲಾಯಿತು. ಎರಡನೆಯ ಮಹಾಯುದ್ಧದಲ್ಲಿ ಈ ಚರ್ಚು ಎರಡು ಸಾರಿ ಬಾಂಬಿನ ದಾಳಿಗೆ ಗುರಿಯಾದರೂ ಹೆಚ್ಚು ಘಾತವಾಗದೆ ಸಣ್ಣಪುಟ್ಟ ಸುಧಾರಣೆಗೆ ಒಳಗಾಯಿತು. ಇದರ ಪೂರ್ಣನಾಮ ದಿ ಕೊಲೆಜಿಯೆಟ್ ಚರ್ಚ್ ಆಫ್ ಸೇಂಟ್ ಪೀಟರ್, ವೆಸ್ಟ್‍ಮಿನ್ಸ್ಟರ್ ಎಂದು. ಇದು ನೇರವಾಗಿ ಇಂಗ್ಲೆಂಡಿನ ರಾಣಿಯ ಆಡಳಿತಕ್ಕೆ ಒಳಪಟ್ಟಿದೆ. ಸ್ವತಂತ್ರ ಹಣಕಾಸಿನ ವ್ಯವಸ್ಥೆ ಪಡೆದಿದೆ. ಸು. 13 ರಿಂದ 16ನೆಯ ಶತಮಾನದ ರಾಷ್ಟ್ರೀಯ ಆಸ್ತಿಯೆನಿಸುವ ವಿವಿಧ ಕಲಾಕೃತಿಗಳು, ಪ್ರತಿಮೆಗಳು ಇರುವುದರ ಜೊತೆಗೆ ಮೂರು ಸಾವಿರಕ್ಕೂ ಹೆಚ್ಚು ರಾಜ ರಾಣಿಯರ ಹಾಗೂ ಪ್ರಮುಖರ ಸಮಾಧಿಯನ್ನೊಳಗೊಂಡಿದೆ. 1066ರಲ್ಲಿ ದೊರೆ ವಿಲಿಯಮ್ ಪ್ರಾರಂಭಿಸಿದ ಕಿರೀಟಧಾರಣೆ ಕಾರ್ಯಕ್ರಮಗಳು ಇಂದಿಗೂ ಅದರಂತೆಯೇ ನಡೆದುಕೊಂಡು ಬರುತ್ತಿವೆ. ಆದರೆ ಆಗ ಉಪಯೋಗಿಸುತ್ತಿದ್ದ ಲ್ಯಾಟಿನ್ ಭಾಷೆ ಬದಲು ಈಗ ಇಂಗ್ಲಿಷ್ ಬಂದಿದೆ. ಆರ್ಚ್‍ಬಿಷಪ್ ಆಫ್ ಕ್ಯಾಂಟರ್‍ಬರಿ ಅಂದಿನಿಂದ ಇಂದಿನವರೆಗೂ ಕಿರೀಟಧಾರಣೆಯ ಪೌರೋಹಿತ್ಯ ವಹಿಸುವನು. ಇಲ್ಲಿನ ಗ್ರಂಥಾಲಯದ ರಕ್ಷಣೆಯಲ್ಲಿ ಪ್ರಸಿದ್ಧ “ಡೂಮ್ಸ್‍ಡೆ” ಗ್ರಂಥವಿದೆ.									
	(ಆರ್.ಎನ್.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ